ಇಳಿಮುಖ ಪ್ರತಿನಿಧಾನ ಅಂಚು ದರ ಸೂತ್ರ-
ಒಬ್ಬ ಅನುಭೋಗಿ ತನ್ನಲ್ಲಿರುವ ಒಂದು ಸರಕು ಅಥವಾ ಸೇವೆಗೆ ಪ್ರತಿಯಾಗಿ ಇನ್ನೊಂದು ಸರಕನ್ನೋ ಸೇವೆಯನ್ನೋ ಪಡೆಯುವಾಗ, ಆ ಇನ್ನೊಂದು ಸರಕಿನ ಅಥವಾ ಸೇವೆಯ ಒಂದೊಂದು ಹೆಚ್ಚಿನ ಘಟಕಕ್ಕೂ ತಾನು ಕೊಡಬಯಸುವ ಸರಕಿನ ಅಥವಾ ಸೇವೆಯ ಪ್ರಮಾಣ ಕಡಿಮೆಯಾಗುತ್ತ ಹೋಗುವುದೆಂಬುದನ್ನು ನಿರೂಪಿಸುವ ಅರ್ಥಶಾಸ್ತ್ರ ಸೂತ್ರ (ಲಾ ಆಫ್ ಡಿಮಿನಿಷಿಂಗ್ ಮಾರ್ಜಿನಲ್ ರೇಟ್ ಆರ್ಫ್ ಸಬ್‍ಸ್ಟಿಟ್ಯೂಷನ್). ಇಳಿಮುಖ ಉಪಯುಕ್ತತೆಯ ಸೂತ್ರಕ್ಕೂ ಇದಕ್ಕೂ ನೇರ ಸಂಬಂಧ.

	ಹಣ ಕೊಟ್ಟು ಕೊಳ್ಳುವ ಸರಕು ಸೇವೆಗಳಿಗೂ ಈ ಸೂತ್ರ ಅನ್ವಯವಾಗುತ್ತದೆ. ಒಂದು ಸರಕನ್ನೋ ಸೇವೆಯನ್ನೋ ಹೆಚ್ಚು ಹೆಚ್ಚಾಗಿ ಪಡೆದಂತೆಲ್ಲ ಆತನಿಗೆ ಸಾಪೇಕ್ಷವಾಗಿ ಆ ಪದಾರ್ಥದ ಉಪಯುಕ್ತತೆ ಕಡಿಮೆ ಆಗುವುದರಿಂದ ಆ ಸರಕಿನ ಇನ್ನೊಂದು ಘಟಕಕ್ಕೆ ಪ್ರತಿಯಾಗಿ ಕೊಡಬಯಸುವ ಹಣದ ಪ್ರಮಾಣ ಕಡಿಮೆಯಾಗುವುದು ಸಹಜ. ಒಂದು ಸರಕಿನ ಅಥವಾ ಸೇವೆಯ ನಿರ್ದಿಷ್ಟ ಪ್ರಮಾಣಕ್ಕೆ ಅನುಭೋಗಿ ಕೊಡಬಯಸುವ ಬೆಲೆಯೇ ಅದು ಪ್ರತಿನಿಧಾನದ ಅಂಚಿನ ದರ.

	ಪರಮಾವಧಿ ತೃಪ್ತಿ ಪಡೆಯುವ ದೃಷ್ಟಿಯಿಂದ ಹಲವು ವಿವಿಧ ಸರಕು ಸೇವೆಗಳ ಬಯಕೆಗಳ ನಡುವೆ ಅನುಭೋಗಿ ಆಯ್ಕೆ ಮಾಡುವ ಜೋಡಣೆಯ ಸ್ವರೂಪವೂ ತತ್ಸಂಬಂಧವಾಗಿ ಆತನ ವರ್ತನೆಯ ರೀತಿನೀತಿಗಳೂ ಅರ್ಥಶಾಸ್ತ್ರದ ಒಂದು ಮುಖ್ಯ ಅಧ್ಯಯನ ವಿಷಯ, ಉಪಯುಕ್ತತೆಯನ್ನಳೆಯಬಹುದು ಎಂಬ ಊಹೆಯ ಆಧಾರದ ಮೇಲೆ ಅರ್ಥಶಾಸ್ತ್ರದ ನವ ಅಭಿಜಾತ ಪಂತ ರಚಿಸಿದ ಸೂತ್ರಗಳನ್ನು ನಿರಾಕರಿಸಿ, ಅದನ್ನು ಹೋಲಿಸುವುದು ಮಾತ್ರ ಸಾಧ್ಯವೆಂಬ ಭಾವನೆಯ ಆಧಾರದ ಮೇಲೆ ಕೆಲವು ಆಧುನಿಕ ಅರ್ಥಶಾಸ್ತ್ರಜ್ಞರು ರಚಿಸಿರುವ ಹೊಸ ಸಿದ್ಧಾಂತಗಳಿಗೆ ಅಳವಡುವಂತೆ ಈ ಇಳಿಮುಖ ಅಂಚು ದರ ಸೂತ್ರ ರಚಿತವಾಗಿದೆ. ಹಿಂದೆಯೇ ಎಡ್ಜ್‍ವರ್ತ್. ಆರ್ಮಿಂಗ್ ಫಿಷರ್, ವಿಲ್‍ಫ್ರಡೋ ಪೇರೇಟೊ ಮುಂತಾದ ಗಣ್ಯ ಅರ್ಥಶಾಸ್ತ್ರಜ್ಞರು ಈ ನಿಟ್ಟಿನಲ್ಲಿ ಆಲೋಚಿಸಿದ್ದರಾದರೂ ಈ ಹೊಸ ಚಿಂತನೆಗೆ ಅನುಸಾರವಾದ ಸಿದ್ಧಾಂತಗಳಿಗೆ ಖಚಿತರೂಪ ಕೊಟ್ಟವರು ಜೆ.ಆರ್.ಹಿಕ್ಸ್ ಮತ್ತು ಆರ್.ಜಿ.ಡಿ.ಆಲೆನ್.

	ಒಬ್ಬ ವ್ಯಕ್ತಿ ಅನುಕ್ರಮವಾಗಿ ಒಂದು ಸರಕಿನ ಅಥವಾ ಸೇವೆಯ ಘಟಕಗಳನ್ನು ಇನ್ನೊಂದು ಸರಕಿನ ಅಥವಾ ಸೇವೆಯ ಘಟಕಗಳಿಗೆ ವಿನಿಮಯ ಮಾಡಲು ಸಿದ್ಧವಿರುವ ದರವೇ ಪ್ರತಿನಿಧಾನದ ಅಂಚು ದರ. ಉದಾಹರಣೆಗೆ, ಒಬ್ಬಾತನಲ್ಲಿ ಆರಂಭದಲ್ಲಿ x ಸರಕು ತಾನು ಬಯಸುವುದಕ್ಕಿಂತ ಅಲ್ಪ ಪ್ರಮಾಣದಲ್ಲಿಯೂ ಥಿ ಸರಕಿನ ಪ್ರಮಾಣ ಹೆಚ್ಚಾಗಿಯೂ ಇರುವುದಾದರೆ, x ಸರಕಿನ ಇನ್ನೂ ಕೆಲವು ಘಟಕಗಳನ್ನು ಪಡೆಯಲು ಆತ ಹೆಚ್ಚು ಪ್ರಮಾಣದಲ್ಲಿ ಸರಕು ಕೊಡಲು ಸಿದ್ಧನಾಗಿರುವನೆಂದು ಹೇಳಬಹುದು. x ಸರಕಿನ ಇನ್ನೊಂದು ಘಟಕ ಹೊಂದಲು ಇದಕ್ಕೆ ಪ್ರತಿಯಾಗಿ ಆತ ತ್ಯಜಿಸಲು ಸಿದ್ಧವಿರುವ ಥಿ ಸರಕಿನ ಪ್ರಮಾಣವೇ ಪ್ರತಿನಿಧಾನದ ಅಂಚಿನ ದರ; ಅಂದರೆ ಒಬ್ಬ ವ್ಯಕ್ತಿಗೆ ಆಸಕ್ತಿಯಿರುವ ಎರಡು ಸರಕುಗಳ ವಿನಿಮಯದಲ್ಲಿ ಅವುಗಳ ಅಂಚಿನ ಘಟಕಗಳ ವಿನಿಮಯದರ. ಅಂಚಿನ ಘಟಕಗಳಿಗೆ ಆತ ನೀಡುವ ವಿನಿಮಯ ಮೌಲ್ಯವೆಂದೂ ಇದನ್ನು ಹೇಳಬಹುದು.

	ಪ್ರತಿನಿಧಾನದ ಅಂಚು ದರಕ್ಕೆ ಇಳಿಯುವ ಪ್ರವೃತ್ತಿ ಇರುವುದೆಂಬುದೇ ಈ ಸೂತ್ರ. ಈ ಎರಡು ಸರಕುಗಳಲ್ಲಿ ಒಂದನ್ನು ಇನ್ನೊಂದಕ್ಕೆ ಪ್ರತಿನಿಧಾನಿಸುವ ಕ್ರಿಯೆಯಲ್ಲಿ ಒಂದು ಸರಕಿನ ಹೆಚ್ಚು ಘಟಕಗಳನ್ನು ಪಡೆಯುವುದಕ್ಕಾಗಿ ಅನುಭೋಗಿ ತ್ಯಜಿಸುವ ಇನ್ನೊಂದು ಸರಕಿನ ಘಟಕಗಳ ಪ್ರಮಾಣ-ಅಂದರೆ ಪ್ರತಿನಿಧಾನದ ಅಂಚಿನ ದರ-ಕ್ರಮವಾಗಿ ಇಳಿಯುತ್ತ ಸಾಗುತ್ತದೆಯೆಂಬ ಈ ಸೂತ್ರದ ನಿರೂಪಣೆಯಲ್ಲಿ ವ್ಯಕ್ತವಾಗುವ ಭಾವನೆಯನ್ನು ಔದಾಸೀನ್ಯ ರೇಖೆಯ ಸಹಾಯದಿಂದ ವಿಸ್ತರಿಸಬಹುದು. 
(ನೋಡಿ- ಔದಾಸಿನ್ಯ-ರೇಖೆಗಳು)
(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ